ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ತಾನೇ ಉರಿದರು ದೀಪವು ಮನೆಗೆ ಬೆಳಕ ಕೊಡುವುದು

🌺 ತಾನೇ ಉರಿದರು ದೀಪವು ಮನೆಗೆ ಬೆಳಕ ಕೊಡುವುದು 🌺

ತಾನು ನೊಂದರೂ ಪರವಾಗಿಲ್ಲ, ತನ್ನ ಆಶ್ರಯ ಬಯಸಿದವರಿಗೆ ಒಳಿತು ಮಾಡುವುದೇ ಜೀವನದ ನಿಜವಾದ ಅರ್ಥ. ಈ ನಿಟ್ಟಿನಲ್ಲಿ ಬೆಳಕು ನೀಡುವ ದೀಪವನ್ನೊಮ್ಮೇ, ತಾನು ಸುಟ್ಟರೂ ಗಂಧವ ಹರಡುವ ಗಂಧದ ಕಡ್ಡಿಯನ್ನು, ತನ್ನ ಮೈ ಮುರಿದರೂ ಪರರಿಗೆ ಸಿಹಿ ನೀಡುವ ಕಬ್ಬನ್ನೊಮ್ಮೆ ಇಲ್ಲಿ ಸ್ಮರಿಸುವುದು ಸೂಕ್ತವಲ್ಲವೇ..??


ಮನುಷ್ಯನ ಜೀವನವೂ ಇದೇ ತರಹದ ಪರಹಿತಕ್ಕಾಗಿ ಜೀವ ಸವೆಸಿದರೆ, ಜಗತ್ತು ಇಂದು ಸ್ಮರಿಸುವ ಹಲವಾರು ಮಹಾತ್ಮರ ಸಾಲಿನಲ್ಲಿ ಅಲ್ಪರಾದ ನಾವುಗಳೂ ಕೂಡ ಸ್ಥಾನ ಪಡೆಯಬಹುದಲ್ಲವೇ..?? ವಿವೇಕಾನಂದ, ರಾಮಕೃಷ್ಣ ಪರಮಹಂಸ, ಸುಭಾಷ್, ಭಗತ್, ಗಾಂಧೀಜಿ, ಶಾಸ್ತ್ರೀಜಿ ಪಟೇಲರಂತಹ ಇನ್ನೂ ಹಲವಾರು ದಿವ್ಯ ಚೇತನಗಳನ್ನು ಇಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದೇವೆ ಎಂದರೆ ಅವರುಗಳು ಮಾಡಿದ್ದಾದರೂ ಏನು..?? ನಮ್ಮ ಅಜ್ಜ ಮುತ್ತಜ್ಜರ ಹೆಸರುಗಳನ್ನು ಒಮ್ಮೆಲೆ ಹೇಳುವುದಕ್ಕೆ ಸಾಧ್ಯವಾಗದೇ ಒದ್ದಾಡುವ ನಾವುಗಳು ಅದಷ್ಟೋ ಶತಮಾನಗಳ ಹಿಂದೆ ಇದ್ದ ಇಂತಹ ಮಹಾನುಭಾವರ ನಾಮಾಂಕಿತಗಳನ್ನು ಉಚ್ಛರಿಸಲು ಕ್ಷಣಮಾತ್ರ ಸಾಕು ಎನ್ನುವುದಾದರೆ ಅವರಲ್ಲೇನೋ ವಿಶೇಷತೆ ಇತ್ತು ಎಂದೇ ಅರ್ಥವಲ್ಲವೇ..???

ಅವರೂ ನಮ್ಮಂತೆಯೇ ಸಾಮಾನ್ಯರು, ಅವರಿಗೂ ನಮ್ಮ ತಾತ ಮುತ್ತಾತಂದಿರಿಗಿದ್ದ ವ್ಯತ್ಯಾಸವಿಷ್ಟೇ, ಇವರು ತಾವು ತಮ್ಮ ಸಂಸಾರ ತಮ್ಮ ಮಕ್ಕಳು ಎಂದು ಜೀವಿಸಿದವರು, ಆದರೆ ಅವರು ನಾನು ನನ್ನ ದೇಶ, ನನ್ನ ಮಾತೃಭೂಮಿ ಎಂದು ಜೀವಿಸಿದವರು. ಅದಕ್ಕೇ ಅವರು ಇಂದಿಗೂ ಚಿರಸ್ಮರಣೀಯರು.

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" 'ಜನ್ಮಕೊಟ್ಟ ತಾಯಿ ಹಾಗೂ ಜನ್ಮಭೂಮಿ ಇವುಗಳು ಸ್ವರ್ಗಕ್ಕಿಂತಲೂ ಮಿಗಿಲು' ಎಂಬುದೇ ಮೇಲಿನ ಮಾತಿನ ತಾತ್ಪರ್ಯ. ನನಗಾಗಿ ಬದುಕದೇ ಪರರಿಗಾಗಿ ಬದುಕಿದವರನ್ನು ಜನತೆ ಶತಶತಮಾನಗಳನ್ನು ಕಳೆದರೂ ಮರೆಯಲಾರದು. ಅಮೇರಿಕಾದ ಅಬ್ರಹಾಂ ಲಿಂಕನ್, ಆಫ್ರಿಕಾದ ನೆಲ್ಸನ್ ಮಂಡೇಲಾ ರಂತಹ ನಾಯಕರುಗಳು ಕಪ್ಪು ಜನಾಂಗದ ಮೇಲಾಗುವ ಅನ್ಯಾಯಕ್ಕಾಗಿ ಸಿಡಿದೆದ್ದು ಇಂದಿಗೂ ಕೂಡ ಅಮೇರಿಕಾ ಮತ್ತು ಆಫ್ರಿಕಾದ ಜನಮಾನಸದಲ್ಲಿ ದೃವತಾರೆಯಂತೆ ಕಂಗೊಳಿಸುತಿದ್ದಾರೆ.

ಮನುಷ್ಯ ಜನ್ಮ ಪರಹಿತಕ್ಕೆ ಸಲ್ಲದಿದ್ದರೆ ಅಂತಹ ಜನ್ಮ ಉಪಯೋಗಕ್ಕೆ ಬಾರದು. ಈ ನಿಟ್ಟಿನಲ್ಲಿ ವಚನಕಾರರಾದ ಬಸವಣ್ಣನವರು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ...

ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,
ಸತ್ಪಾತ್ರಕ್ಕೆ ಸಲ್ಲದಯ್ಯ!
ನಾಯ ಹಾಲು ನಾಯಿಂಗಲ್ಲದೆ,
ಪಂಚಾಮೃತಕ್ಕೆ ಸಲ್ಲದಯ್ಯ!
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯ.
ಪಾಪದಿಂದ ಸಂಪಾದಿಸಿದ ಹಣ ಪ್ರಾಯಶ್ಚಿತ್ತಕ್ಕೆ ಹೊರತು ಬೇರೇನಕ್ಕೂ ಅಲ್ಲ, ನಾಯಿಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಅಲ್ಲ, ಕೂಡಲ ಸಂಗಮನಾಥನ ಶರಣರಿಗೆ ಉಪಯೋಗಕ್ಕೆ ಬಾರದೇ ಸಂಪಾದಿಸಿದ ಧನ, ಕನಕವಲ್ಲ ವ್ಯರ್ಥ ಎಂದಿದ್ದಾರೆ.

ನಾವು ಸಂಪಾದಿಸಿದ ಹಣವು ಕೇವಲ ಮೋಜು ಮಸ್ತಿಗಳಿಗಾಗಿ ಅಲ್ಲ, ಅದರಿಂದ ಅಸಹಾಯಕರ ದೀನರ ದಲಿತರ ಒಂದು ಹೊತ್ತಿನ ಹಸಿವೆಯನ್ನು ನೀಗಿಸುವುದಕ್ಕಾಗಿ ಮೀಸಲಿಡುವಂತಾಗಬೇಕು. ದಾನ ಧರ್ಮಾದಿಗಳಿಂದ ಪೂರ್ವಜನ್ಮದ ಪಾಪಕರ್ಮಗಳನ್ನು ಈ ಜನ್ಮದಲ್ಲಿ ಕಡಿಮೆಗೊಳಿಸುವಂತಾಗಬೇಕು.

ಬೆಟ್ಟದ ಬಿದಿರು ಅಟ್ಟಕ್ಕೆ ಏಣಿಯಾಗಬಲ್ಲದು, ಕಾಲು ಮುರಿದವರಿಗೆ ಊರುಗೋಲಾಗಬಲ್ಲದು ಎಂದಮೇಲೆ ಮನುಷ್ಯರಾದ ನಾವುಗಳು ದ್ವೇಷ ಅಸೂಯೆಯಿಂದ ಗಳಿಸುವುದಾದರೂ ಏನಿದೆ..?? 

ನಿಮ್ಮಲ್ಲಿರುವುದೆಲ್ಲವನ್ನೂ ದಾನ ಮಾಡಿ ದಾನಶೂರ ಕರ್ಣರಾಗಿರಿ ಎಂಬುದು ನನ್ನ ಮಾತಿನ ಅರ್ಥವಲ್ಲ. ಬದಲಾಗಿ ಅವಶ್ಯಕತೆಯಿದ್ದವರಿಗೆ ನಿಮ್ಮಿಂದಾದ ಚಿಕ್ಕ ಸಹಾಯ ಮಾಡಿ, ಈ ಭೂಮಿಯ ಮೇಲಿರುವ ಅದೆಷ್ಟೋ ನಿರ್ಜೀವ ವಸ್ತುಗಳು ನಮ್ಮ ಕೆಲಸಗಳಿಗೆ ಮೂಲರೂಪವಾಗಿರುವಂತೆ ಮನುಷ್ಯರಾದ ನಾವುಗಳು ಯಾರಿಗೂ ಉಪಯೋಗಕ್ಕೆ ಬಾರದೇ ನಿಷ್ಪ್ರಯೋಜಕರಾಗುವುದು ಸರಿಯಲ್ಲ. 

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ ಎಂಬಂತಾಗದೇ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡುತ್ತಾ, ಒಳ್ಳೆಯದನ್ನು ಬಯಸುತ್ತಾ ಜೀವನ ಸಾಗಿಸಿದರೆ, ನಮ್ಮ ಬದುಕೂ ಕೂಡ ದೀಪಾವಳಿಯ ದೀಪದಂತೆ ಮತ್ತೊಬ್ಬರ ಮನೆಯ ಬೆಳಕಾಗಿ ಪರಿಣಮಿಸಿದ ಸಾರ್ಥಕ ಬದುಕು ನಮ್ಮ ಸಾಗುತ್ತದೆ ಅಲ್ಲವೇ...? ಅಂತಹ ಜೀವನವು ಮುಂದೊಂದು ದಿನ ಪ್ರಪಂಚದ ಮುಂದೆ ಅನಾವರಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಲೇಖನ ಕೃಪೆ :
🌺 ಶ್ರೀ ಪಿ. ಎಲ್. ಪವಾರ 🌺

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area