ಸುಧಾಮೂರ್ತಿ ಅವರಿಗೆ 21 ನೇ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ
ರಾಜ್ಯದ ಪ್ರತಿಷ್ಠಿತ ಸಂಸ್ಥೆ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 21 ನೇ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸಿ ಗೌರವಿಸಿದ್ದಾರೆ.
ಸುಧಾಮೂರ್ತಿ ಅವರು ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ನೆರೆ, ಬರ ಪರಿಹಾರಕ್ಕೆ ದೇಣಿಗೆ, ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ನೆರವು, ಕೊರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿ, ಬಡ ರೋಗಿಗಳ ಚಿಕಿತ್ಸೆಗೆ ನೆರವು ಮೊದಲಾದ ಕೆಲಸಗಳು ಮತ್ತು ಅನೇಕ ರೀತಿಯ ಜನಾನುರಾಗಿ, ಸಮಾಜ ಮುಖಿ ಕಾರ್ಯಗಳ ಮೂಲಕವೇ ಮನೆಮಾತಾಗಿದ್ದಾರೆ. ಅವರ ಸಮಾಜ ಸೇವೆಯನ್ನು ಪರಿಗಣಿಸಿ ಮೈಸೂರು ವಿವಿ ಅವರಿಗೆ ಕಳೆದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಸುಧಾ ಮೂರ್ತಿ ಅವರ ಬಗ್ಗೆ :
ಇವರು 1950 ರಲ್ಲಿ ಧಾರವಾಡ ಜಿಲ್ಲೆಯ 'ಶಿಗ್ಗಾಂವ್' (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ 1950 ರ ಆಗಸ್ಟ್ 19, ರಂದು ಜನಿಸಿದರು. ಜಯಶ್ರೀ ದೇಶಪಾಂಡೆ ಸುಧಾ ಮೂರ್ತಿ ಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996 ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.
ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು.ಬದುಕು ಬಡತನದಲ್ಲಿ ಆರಂಭವಾದರೂ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧ ಶ್ರೀಮಂತಿಕೆಯಲ್ಲಿ. ತನ್ನ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ, ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿದ್ದಾರೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಾಯಿ ಭಾಷೆ, ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜನೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ ಹಣ , ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿದ್ದಾರೆ ಸುಧಾ ಮೂರ್ತಿ.
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know